ಊನ
ಸತ್ತ ವರ್ಷದಲ್ಲಿ ಮಾಡುವ ಹದಿನಾರು ಶ್ರಾದ್ಧಗಳಲ್ಲಿ ನಾಲ್ಕು: ಊನಮಾಸಿಕ, ತ್ರೈಪಾಕ್ಷಿಕ, ಊನ ಷಾಣ್ಮಾಸಿಕ, ಊನಾಬ್ದಿಕ. ಈ ನಾಲ್ಕು ಶ್ರಾದ್ಧಗಳನ್ನು ವಿಹಿತ ಕಾಲದಲ್ಲಿ ಮಾಡದೆ ಬಿಟ್ಟರೆ ಇತರ ಶ್ರಾದ್ಧಗಳಂತೆ ಇವನ್ನು ಮುಂದೆ ಕಾಲಾಂತರದಲ್ಲಿ ಮಾಡುವಂತಿಲ್ಲ. ಬಿಟ್ಟರೆ ಇವು ಊನ(ಲೋಪ)ವಾದಂತೆಯೇ. ಇದರಿಂದಲೇ ಇವಕ್ಕೆ ಈ ಹೆಸರು ಬಂದಿದೆ. ಊನಮಾಸಿಕವನ್ನು ತಿಂಗಳಿಗೆ ಮೂರು ದಿನ ಕಡಿಮೆ ದಿನಗಳಲ್ಲಿ ಎಂದರೆ ಮರಣದಿನದಿಂದ 27 ದಿನಗಳ ಮೇಲೆ 30 ದಿನಗಳೊಳಗೂ ತ್ರೈಪಕ್ಷಿಕವನ್ನು 40 ದಿನಗಳ ಮೇಲೆ ಮೂರು ಪಕ್ಷಗಳು ಎಂದರೆ 45 ದಿನಗಳೊಳಗೂ ಊನಷಾಣ್ಮಾಸಿಕವನ್ನು 170 ದಿನಗಳ ಮೇಲೆ 180 ದಿನಗಳೊಳಗೂ ಊನಾಬ್ದಿಕವನ್ನು 340 ದಿನಗಳ ಮೇಲೆ 355 ದಿನಗಳೊಳಗೂ ಮಾಡಬೇಕು. ಆ ವರ್ಷ ಮಧ್ಯದಲ್ಲಿ ಅಧಿಕಮಾಸ ಬಂದರೆ ಊನಾಬ್ದಿಕವನ್ನು 355 ದಿನಗಳೊಳಗೆ ಮಾಡಬೇಕಾಗುತ್ತದೆ.

ತ್ರಿಪುಷ್ಕರ ನಂದತಿಥಿ ಚತುರ್ದಶಿ ಅಮಾವಾಸ್ಯೆ ಶುಕ್ರವಾರ ಕೃತ್ತಿಕೆ ಆಶ್ಲೇಷ ಜ್ಯೇಷ್ಠ ಮೂಲ ಪುಬ್ಬೆ ಪೂರ್ವಾಷಾಢ ಪೂರ್ವಾಭಾದ್ರೆ ನಕ್ಷತ್ರಗಳು-ಇವುಗಳಲ್ಲಿ ಊನಶ್ರಾದ್ಧವನ್ನು ಮಾಡಕೂಡದು. ದ್ವಿತೀಯೆ ದ್ವಾದಶೀ ತಿಥಿಗಳು, ಉತ್ತರೆ ವಿಶಾಖೆ ಉತ್ತರಾಷಾಢ ಪೂರ್ವಾಭಾದ್ರೆ ನಕ್ಷತ್ರಗಳು, ಭಾನು ಮಂಗಳ ಶನಿವಾರಗಳು-ಈ ತಿಥಿ ವಾರ ನಕ್ಷತ್ರಗಳ ಸೇರುವಿಕೆಗೆ ತ್ರಿಪುಷ್ಕರವೆಂದು ಹೆಸರು. ಪ್ರಥಮೆ ಷಷ್ಠಿ ಏಕಾದಶೀ ಈ ಮೂರೂ ನಂದತಿಥಿಗಳು. ಈ ನಿಷಿದ್ಧ ಕಾಲವನ್ನು ಬಿಟ್ಟು ಉಳಿದ ನಿಯತಕಾಲಿಕವಾದ ದಿನಗಳಲ್ಲಿ ಊನಶ್ರಾದ್ಧಗಳನ್ನು ಮಾಡಬೇಕು.
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ